ಇನಾಂಗಳು

ಇನಾಂ ಎಂಬ ಮಾತು ಪರ್ಷಿಯನ್ ಭಾಷೆಗೆ ಸೇರಿದ್ದು. ಪರ್ಷಿಯನ್ ಭಾಷೆಯಲ್ಲಿ ಇನಾಂ ಎಂಬ ಮಾತಿಗೆ ಪ್ರತಿಫಲ ಅಥವಾ ಬೆಲೆಯಿಲ್ಲದೆ ಕೊಡುವ ವಸ್ತು ಎಂಬ ಅರ್ಥ ಇದೆ. ಆದರೆ ಇನಾಂ ಎಂಬ ಮಾತು ಭಾರತೀಯ ಭಾಷೆಗಳಲ್ಲಿ ಬಹು ಕಾಲದ ಹಿಂದೆ ಸೇರಿ. ಅದರ ಮೂಲ ಯಾವುದು ಎಂಬುದು ಗೊತ್ತಿಲ್ಲದಷ್ಟು ದೇಶ್ಯವಾಗಿ ಹೋಗಿದೆ. ಇನಾಂ ಎಂಬ ಮಾತು ಸರ್ವಸಾಧಾರಣವಾಗಿ ಸಂಭಾವನೆ ಎಂಬ ಅರ್ಥದಲ್ಲಿ ಈಗ ಬಳಕೆಯಲ್ಲಿದೆ. ಇಲ್ಲಿ ಅದಕ್ಕೆ ನ್ಯಾಯಶಾಸ್ತ್ರದಲ್ಲಿ ಇರುವ ಅರ್ಥವನ್ನು ವಿವರಿಸಲು ಪ್ರಯತ್ನಿಸಲಾಗಿದೆ.

	ಇನಾಂ ಎಂದರೆ ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಹಿತಕ್ಕಾಗಿ ಕೊಟ್ಟ ಹಿಡುವಳಿ-ಎಂದು ಹೇಳಬಹುದು. ಇನಾಂಗಳು ಭಾರತದಲ್ಲಿ ಬಹು ಪುರಾತನ ಕಾಲದಿಂದಲೂ ಇವೆ. ಹಿಂದೂ ರಾಜರ ಆಳ್ವಿಕೆಯ ಕಾಲದಲ್ಲಿ, ದೇವಸ್ಥಾನಗಳ ರಕ್ಷಣೆಗಾಗಿಯೋ ದೇವರ ಸೇವೆಗಾಗಿಯೋ ಗುರುಗಳ-ಹಾಗೂ ಮಠಗಳ ಪೋಷಣೆಗಾಗಿಯೋ ಕಂದಾಯವಿಲ್ಲದೆಯೇ ಭೂಮಿಯನ್ನು ದತ್ತಿ ಕೊಡುವ ಪರಿಪಾಟವಿತ್ತು. ಕೆಲವು ಬಾರಿ ದೇವಸ್ಥಾನಗಳಲ್ಲಿ ದೇವತಾಸೇವೆ ಮಾಡುವ ಅರ್ಚಕರಿಗೆ, ನಗಾರಿ ಬಡಿಯುವವರಿಗೆ, ಮೇಳ ಮಾಡುವವರಿಗೆ, ಇಂಥ ಇತರ ಸೇವೆ ಮಾಡುವವರಿಗೆ ಇನಾಂಗಳನ್ನು ಕೊಡುವ ಪದ್ಧತಿಯೂ ಇತ್ತು. ಇನ್ನೂ ಕೆಲವು ಬಾರಿ, ದೊರೆಗಳಿಗೆ ಸಲ್ಲಿಸುವ ಸೇವೆಗಾಗಿ-ಸೈನ್ಯದಲ್ಲಿ ದುಡಿಯುವುದೋ ಹಳ್ಳಿಗಳಲ್ಲಿ ಕಂದಾಯ ವಸೂಲು ಮಾಡುವುದೋ ಗ್ರಾಮದ ಲೆಕ್ಕಪತ್ರ ಬರೆಯುವುದೋ ಊರಿನ ಕಾವಲು ಕಾಯುವುದೋ ಮುಂತಾದ ಯಾವುದಾದರೂ ರೀತಿಯ ಸೇವೆಗಾಗಿ ದೊರೆಗಳು ಇನಾಂಗಳನ್ನು ಕೊಡುತ್ತಿದ್ದರು. ಒಮ್ಮೊಮ್ಮೆ ಹಳ್ಳಿಯಲ್ಲಿ ಸಾರ್ವಜನಿಕ ಸೇವೆ ಸಲ್ಲಿಸುವ ಬಡಗಿ, ಕಮ್ಮಾರ, ಅಗಸ, ನಾಯಿಂದ, ಮುಂತಾದ ಕಸಬುದಾರರಿಗೂ ಬಹುಮಾನವಾಗಿ ಆಳುವ ದೊರೆ ಭೂಮಿಯನ್ನು ಇನಾಂ ಆಗಿ ಕೊಡುತ್ತಿದ್ದದ್ದು ಉಂಟು.

	ಹಿಂದೂ ಅರಸರು ಅನುಸರಿಸುತ್ತಿದ್ದ ಈ ಪದ್ಧತಿಯನ್ನು ಭಾರತಕ್ಕೆ ಬಂದ ಮುಸ್ಲಿಂ ದೊರೆಗಳೂ ಅನುಸರಿಸಿದರು. ಮುಸ್ಲಿಂ ದೊರೆಗಳು ಕೊಟ್ಟ ಹಿಡುವಳಿಗಳನ್ನು ಜಹಗೀರುಗಳು ಎಂದು ಕರೆಯುತ್ತಿದ್ದರು. ಹಿಂದೂ ದೊರೆಗಳು ಕೊಡುತ್ತಿದ್ದ ಇನಾಂ ಹಿಡುವಳಿಗಳಿಗೂ ಮುಸ್ಲಿಂ ರಾಜರು ಕೊಡುತ್ತಿದ್ದ ಜಹಗೀರುಗಳಿಗೂ ಇದ್ದ ಒಂದು ಮುಖ್ಯ ವ್ಯತ್ಯಾಸವೆಂದರೆ, ಜಹಗೀರುಗಳು ಜಹಗೀರುದಾರರು ಸತ್ತೊಡನೆಯೇ ಮರಳಿ ದೊರೆಗೇ ಸೇರುತ್ತಿದ್ದುವು. ಮೂಲ ಜಹಗೀರುದಾರನ ವಂಶಸ್ಥರಿಗೆ ದೊರೆ ಮತ್ತೆ ಹೊಸ ಸನ್ನದು ಕೊಟ್ಟರೆ ಮಾತ್ರ ಜಹಗೀರು ಮುಂದುವರಿಯುತ್ತಿತ್ತು. ಆದರೆ ಧಾರ್ಮಿಕ ಬಾಬಾಗಳಿಗೆ, ಸತ್ಪುರುಷರಿಗೆ, ಸಾಧು ಸಂತರಿಗೆ, ವಿದ್ವಾಂಸರಿಗೆ ಕೊಟ್ಟ ಜಹಗೀರುಗಳು ಮಾತ್ರ ನಿರಂತರವಾಗಿ ಜಹಗೀರುದಾರರಿಗೇ ಸೇರುತ್ತಿದ್ದುವು.

	ಬ್ರಿಟಿಷರಾದರೂ ಹಿಂದೂ ಮತ್ತು ಮುಸ್ಲಿಂ ದೊರೆಗಳು ಇಟ್ಟುಕೊಂಡಿದ್ದ ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದರು. ಈಸ್ಟ್ ಇಂಡಿಯ ಕಂಪನಿ. ತನಗೆ ಅಮೋಘ ಸೇವೆ ಸಲ್ಲಿಸಿದವರಿಗೆ ಜಹಗೀರುಗಳನ್ನು ಹಾಕಿಕೊಟ್ಟಿತು. ಆದರೆ 1829ರ ಹೊತ್ತಿಗೆ ಕಂಪನಿಯ ಡೈರೆಕ್ಟರುಗಳ ನಿರ್ದೇಶನದ ಮೇರೆಗೆ ಜಹಗೀರುಗಳನ್ನು ಹಾಕಿ ಕೊಡುವ ಪದ್ಧತಿ ನಿಂತುಹೋಯಿತು. ಸಾಧಾರಣವಾಗಿ ಯೋಗ್ಯ ಸೇವೆ ಸಲ್ಲಿಸಿದವರಿಗೆ ಹಣವನ್ನೆ ಸಂಭಾವನೆಯನ್ನಾಗಿ ಕೊಡುತ್ತಿದ್ದರು. ಆದರೆ ವಿಶೇಷ ಸಂದರ್ಭಗಳಲ್ಲಿ-ಅದರಲ್ಲೂ ತಮ್ಮ ಯುದ್ಧಗಳಲ್ಲಿ ವಿಶೇಷ ಸಹಾಯ ನೀಡಿದವರಿಗೆ-ಭೂಮಿಯನ್ನು ಜಹಗೀರು ಹಾಕಿ ಕೊಡುತ್ತಿದ್ದರು. ಅದೇ ಜಮೀನ್‍ದಾರಿ ಪದ್ಧತಿ ಎಂಬ ಹೆಸರಿನಿಂದ ಮುಂದುವರಿದುಕೊಂಡು ಬಂತು.

	ಈ ಇನಾಂಗಳನ್ನು ಮತ್ತು ಮಾನ್ಯಗಳನ್ನು ಕೊಟ್ಟಾಗ ದೊರೆ ತನ್ನ ವಂಶಪರಂಪರೆಯನ್ನು ಎತ್ತಿ ಹೊಗಳಿಸಿ, ಯಾರಿಗೆ ಕೊಟ್ಟಿದೆಯೋ ಅವರ ಹೆಸರನ್ನು ನಮೂದಿಸಿ, ಕೊಟ್ಟ ಭೂಮಿಯ ವಿವರಗಳನ್ನು ಸ್ಪಷ್ಟಪಡಿಸಿ, ಯಾವ ಉದ್ದೇಶಕ್ಕಾಗಿ ಕೊಟ್ಟಿದೆಯೋ ಅದನ್ನೂ ಉಲ್ಲೇಖಿಸಿ, ಯಾವ ಷರತ್ತುಗಳಿಗೆ ಒಳಪಟ್ಟು ಕೊಟ್ಟಿದೆಯೋ ಅದನ್ನೂ ಕಾಣಿಸಿ ಶಿಲಾಲಿಪಿಯಲ್ಲೋ ತಾಮ್ರ ಪಟದಲ್ಲೋ ಬರೆಸಿಕೊಡುತ್ತಿದ್ದರು. ಈ ಇನಾಂಗಳು ಸರ್ವಸಾಧಾರಣವಾಗಿ ಸೂರ್ಯಚಂದ್ರರು ಇರುವ ತನಕ ನಡೆದುಕೊಂಡು ಹೋಗಬೇಕೆಂದೂ ಉದ್ದೇಶಕ್ಕೆ ಭಂಗ ತಂದವರಿಗೆ ಇಂಥಿಂಥ ಪಾಪ ತಟ್ಟುವುದೆಂದೂ ಬರೆಸುತ್ತಿದ್ದರು. ಅಂಥವುಗಳನ್ನು ಸನ್ನದು ಎಂದು ಕರೆಯುತ್ತಿದ್ದರು.

	ಇಂಥ ಇನಾಂಗಳನ್ನು ಅಥವಾ ಮಾನ್ಯಗಳನ್ನು ಪೂರ್ವದಲ್ಲಿ ಹಿಂದೂ ದೊರೆಗಳ ಕಾಲದಲ್ಲಿ ಸಾಧಾರಣವಾಗಿ ರಾಜ್ಯದ ದೊರೆಯೇ ಹಾಕಿಕೊಡುತ್ತಿದ್ದ. ಬರಬರುತ್ತ ಮೊಗಲರ ಆಳ್ವಿಕೆ ಬಂದಮೇಲೆ ಪಾಳೆಯಗಾರರು ಕೂಡ ಇನಾಂಗಳನ್ನು ಮಾನ್ಯಗಳನ್ನೂ ಹಾಕಿಕೊಡಲು ಆರಂಭಿಸಿದರು.

	ಇನಾಂಗಳ ಬಗೆ : ನಮ್ಮದೇಶದ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಇನಾಂಗಳಿದ್ದುವು. ಇವನ್ನು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಹೆಸರಿನಿಂದ ಕರೆಯುತ್ತಿದ್ದರು. ಬಂಗಾಳದಲ್ಲಿ ಬಾದಷಾಹಿ (ಅರಸರು ಕೊಟ್ಟದ್ದು) ಮತ್ತು ಹುಕುಮ (ಕೆಳದರ್ಜೆಯ ಅಧಿಕಾರಿಗಳು ಕೊಟ್ಟದ್ದು) ಎಂದು ಎರಡು ಬಗೆಯ ಇನಾಂಗಳಿದ್ದುವು. ಪಂಜಾಬ್ ಮತ್ತು ಈಶಾನ್ಯ ಸರಹದ್ದು ಪ್ರಾಂತ್ಯದಲ್ಲಿ ಲೇಖಿರಾಜ (ಲಾಖಿರಾಜ್) ಅಥವಾ ತೆರಿಗೆ ಇಲ್ಲದ ಇನಾಂಗಳು ಎನ್ನುತ್ತಿದ್ದರು. ಮುಂಬೈ ಪ್ರಾಂತ್ಯದಲ್ಲಿ ಅನೇಕಾನೇಕ ಹೆಸರಿನ ಇನಾಂಗಳಿದ್ದುವು. ಯಾವ ಉದ್ದೇಶಕ್ಕಾಗಿ ಕೊಡುತ್ತಿದ್ದರೋ ಅದನ್ನು ಅವಲಂಬಿಸಿ ಅವುಗಳ ಹೆಸರಿತ್ತು. ಹಾಗೆಯೇ ಮದ್ರಾಸ್ ಮತ್ತು ಮೈಸೂರು ಪ್ರಾಂತ್ಯಗಳಲ್ಲೂ ಇನಾಂಗಳು ಇದ್ದುವು. ಈಸ್ಟ್ ಇಂಡಿಯ ಕಂಪನಿ ಮತ್ತು ಬ್ರಿಟಿಷ್ ಸರ್ಕಾರ ಆಗಾಗ ನೇಮಿಸಿದ ಇನಾಂ ಆಯೋಗಗಳು ಅಂದು ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಇದ್ದಂಥ ಇನಾಂಗಳನ್ನು ಹೀಗೆ ವಿಂಗಡಿಸಿದೆ:

	1 ಧಾರ್ಮಿಕ ಸಂಸ್ಥೆಗಳ, ದೇವಾಲಯಗಳ ರಕ್ಷಣೆ ಮತ್ತು ಪೋಷಣೆಗಾಗಿಯೂ ಅವುಗಳಿಗೆ ಸೇವೆ ಸಲ್ಲಿಸುವವರಿಗಾಗಿಯೂ ಕೊಟ್ಟಂಥ ಹಿಡುವಳಿಗಳು. ಅಂಥವುಗಳನ್ನು ದೇವಸ್ಥಾನ ಅಥವಾ ದೇವದಾಯ ಇನಾಂಗಳು ಎಂದು ಕರೆಯುವರು.

	2 ಧಾರ್ಮಿಕ ಸತ್ಪುರುಷರಿಗೆ-ಸ್ವಾಮಿಗಳು, ಸಾಧು ಸಂತರು. ಮಠಾಧಿಪತಿಗಳು ಮುಂತಾದವರಿಗೆ-ದೊರೆಯೋ ಪಾಳೆಯಗಾರನೋ ದಾನರೂಪವಾಗಿ ಕೊಟ್ಟ ಇನಾಂಗಳು. ಇವುಗಳನ್ನು ಧರ್ಮದಾಯ ಇನಾಂಗಳೆಂದು ಕರೆಯುತ್ತಾರೆ. ಇವು ಸಾರ್ವಜನಿಕರ ಹಿತಾರ್ಥವಾಗಿ ಉಪಯೋಗವಾಗುವಂಥವು.

	3 ಬ್ರಾಹ್ಮಣರು, ವೀರಶೈವ ಮಠಸ್ಥರು ಮುಂತಾದ ಮತೀಯ ವ್ಯಕ್ತಿಗಳಿಗೆ ವೈಯಕ್ತಿಕ ಉಪಭೋಗಕ್ಕಾಗಿ, ವಂಶಪಾರಂಪರ್ಯವಾಗಿ, ತೆರಿಗೆ ಇಲ್ಲದೆ ಅಥವಾ ಕನಿಷ್ಠ ನಾಮಕಾರ್ಥ ತೆರಿಗೆ ವಿಧಿಸಿ, ದಾನ ಮಾಡಿದ ಇನಾಂಗಳು ಇನ್ನೊಂದು ಬಗೆಯವು. ಶ್ರೋತ್ರೀಯ ಇನಾಂಗಳು, ಜಗಂ ಇನಾಂಗಳು ಇಂಥವು.

	4 ಗ್ರಾಮಾಧಿಕಾರಿಗಳಿಗೆ-ಪಟೇಲ, ಶಾನುಭೋಗ (ಹಳೆಯ ಮೈಸೂರಿನಲ್ಲಿ), ಕುಲಕರ್ಣಿ, ಪಟವಾರಿ, ಸನರಿ, ಹಳಬ (ಮುಂಬೈ ಕರ್ಣಾಟಕದಲ್ಲಿ), ಗೌಡ, ತಳವಾರ, ಬಿಟ್ಟಿ, ನೀರುಗಂಟಿ (ಮದ್ರಾಸ್ ಕರ್ಣಾಟಕದಲ್ಲಿ) ಮುಂತಾದವರಿಗೆ-ಅವರು ಸರ್ಕಾರಕ್ಕೆ ಸಲ್ಲಿಸುತ್ತಿದ್ದ ಸೇವೆಗೆ ಪ್ರತಿಫಲವಾಗಿ ಕೊಟ್ಟ ಇನಾಂಗಳು ಇಂಥ ಬಗೆಯವು. ಇವು ಯಾರು ಸೇವೆ ಸಲ್ಲಿಸುವರೋ ಅವರ ವಶದಲ್ಲಿದ್ದುವು. ಇವುಗಳನ್ನು ಸೇವಾದಾಯ ಇನಾಂಗಳೆಂದು ಕರೆಯಬಹುದು. ಮುಂಬೈ ಕರ್ನಾಟಕದಲ್ಲಿದ್ದ ವತನದಾರಿ ಇನಾಂಗಳು ಈ ಬಗೆಯವು.

	5 ಗ್ರಾಮಗಳಲ್ಲಿದ್ದ ಆಯಗಾರರಿಗೆ, ಗ್ರಾಮಸ್ಥರಿಗೆಲ್ಲ ಸೇವೆ ಸಲ್ಲಿಸುತ್ತಿದ್ದವರಿಗೆ, ಗ್ರಾಮದ ಕಸಬುದಾರರಿಗೆ-ಬಡಗಿ, ಕಮ್ಮಾರ, ನಾಯಿಂದ, ಅಗಸ ಮುಂತಾದವರಿಗೆ-ಕೊಟ್ಟಿದ್ದ ಇನಾಂಗಳು. ಇವುಗಳನ್ನು ಆಯಗಾರ ಇನಾಂಗಳೆನ್ನಬಹುದು.

	6 ಹಿಂದಿನ ಕಾಲದಲ್ಲಿ ದೊರೆಗಳಿಗೆ, ಆಳುವ ಒಡೆಯರಿಗೆ ವಿಶೇಷವಾದ ಸೇವೆಯನ್ನು ಮಾಡಿದ್ದಕ್ಕಾಗಿ, ದೊರೆ ಆಪತ್ತಿನಲ್ಲಿದ್ದಾಗ ಪ್ರಾಣರಕ್ಷಣೆ ಮಾಡಿದ್ದಕ್ಕಾಗಿ, ಯುದ್ಧಕಾಲದಲ್ಲಿ ಅಸಹಾಯ ಶೌರ್ಯದ ಕೆಲಸ ಮಾಡಿದ್ದಕ್ಕಾಗಿ ಶತ್ರುಪಕ್ಷದ ರಹಸ್ಯಗಳನ್ನು ತಿಳಿಸಿದ ಸೇವೆಗಾಗಿ, ಯುದ್ಧಕಾಲದಲ್ಲಿ ಸೈನ್ಯವನ್ನು ಒದಗಿಸಿ ಕೊಟ್ಟ ಕೈಂಕರ್ಯಕ್ಕಾಗಿ, ಪ್ರಭುವಾದವ ಒಂದು ಹಳ್ಳಿಯನ್ನೋ ಕೆಲವು ಹಳ್ಳಿಗಳನ್ನೋ ಜಹಗೀರು ಹಾಕಿ ಕೊಡುತ್ತಿದ್ದ. ಇಂಥವುಗಳನ್ನು ಜಹಗೀರ್ ಇನಾಂಗಳು ಎಂದು ಕರೆಯಬಹುದು.

	7 ಭಾರತದಲ್ಲಿ ಬ್ರಿಟಿಷ್ ಆಡಳಿತ ಸ್ಥಾಪನೆ ಆದಮೇಲೆ, ಅದಕ್ಕಿಂತ ಹಿಂದೆ ಇದ್ದ ಸರ್ಕಾರಗಳ ಕೈ ಕೆಳಗಿನ ಪಾಳೆಯಗಾರರಿಗೂ ವಂಶಪಾರಂಪರ್ಯವಾಗಿ ಸೇವೆ ಸಲ್ಲಿಸುತ್ತಿದ್ದ ಗ್ರಾಮ ನೌಕರರಿಗೂ ಕೆಲವೊಂದು ಷರತ್ತುಗಳ ಮೇಲೆ ಇನಾಂಗಳನ್ನು ಕೊಟ್ಟರು.

	8 ಇನ್ನು ಕೆಲವು ಸಾರಿ ಯಾವುದಾದರೂ ಚಿಕ್ಕಪುಟ್ಟ ಸಂಸ್ಥಾನಗಳನ್ನು ಬ್ರಿಟಿಷ್ ಸರ್ಕಾರ ತನ್ನ ವಶಪಡಿಸಿಕೊಂಡಾಗ ಆ ಸ್ಥಳೀಯ ಪಾಳೆಗಾರರ, ದೇಸಾಯಿಗಳ, ಸಂಸ್ಥಾನಾಧೀಶರ ವಂಶಸ್ಥರಿಗೆ ಅವರಿಂದ ವಶಪಡಿಸಿಕೊಂಡ ರಾಜ್ಯಕ್ಕೆ ಬದಲಾಗಿ ಅವರ ಜೀವನಾಂಶಕ್ಕಾಗಿ ಇನಾಂಗಳನ್ನು ಕೊಡಲಾಗುತ್ತಿತ್ತು. ಇಂಥವುಗಳನ್ನು ಮಾಜೀ ದೊರೆಗಳ ಜೀವನಾಂಶ ಇನಾಂಗಳು ಎಂದು ಕರೆಯಬಹುದು.												(ಕೆ.ಸಿ.)

	ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ : ಕಾಲ ಕಳೆದಂತೆ ಈ ಏರ್ಪಾಡಿನಲ್ಲಿ ಕೆಲವು ಅಕ್ರಮ ವ್ಯವಹಾರಗಳು ಕಂಡುಬಂದುವು. ಸ್ವಂತ ಲಾಭಕ್ಕಾಗಿ ದಾಖಲೆಗಳನ್ನೇ ಬದಲಾಯಿಸುವುದು. ಸರಿಯಾದ ಅಂಕಿ ಅಂಶಗಳೇ ಸಿಗದಂತೆ ಅವುಗಳನ್ನು ನಾಶಪಡಿಸುವುದು, ಮುಂತಾದ ಅಕೃತ್ಯಗಳು ಅನೇಕ ಕಡೆ ನಡೆದವು. 18ನೆಯ ಶತಮಾನದ ರಾಜಕೀಯ ಅವ್ಯವಸ್ಥೆಯ ಕಾಲದಲ್ಲಂತೂ ಇವು ಹೆಚ್ಚಾಗಿ ನಡೆದುವು. ಸಂದೇಹಕ್ಕೆಡೆಯಿಲ್ಲದಂತೆ ನಿಷ್ಕøಷ್ಟವಾದ ದಾಖಲೆಗಳಿಲ್ಲದ ಇನಾಂಗಳನ್ನು ರದ್ದು ಮಾಡಿ ಅವುಗಳನ್ನು ವಶಕ್ಕೆ ತೆಗೆದುಕೊಳ್ಳಬೇಕೆಂದು ಬ್ರಿಟಿಷ್ ಸರ್ಕಾರ ಯೋಚಿಸಿತು. ಆಡಳಿತದ ದೃಷ್ಟಿಯಿಂದ ಈ ಯೋಜನೆ ಸಮಂಜಸವಾದದ್ದೇ. ಆದರೆ ಕೆಲವು ಹಿಡುವಳಿಗಳು ಶತಮಾನಗಳ ಹಿಂದೆಯೇ ಕೊಟ್ಟಿದ್ದಂಥವು; ಅವಕ್ಕೆ ಸಂಬಂಧಿಸಿದ ದಾಖಲೆಗಳು ನಷ್ಟವಾಗಿದ್ದುವು. 18ನೆಯ ಶತಮಾನದ ಅರಾಜಕತೆಯ ಪರಿಣಾಮವಾಗಿ, ಅನುದಾನವನ್ನು ಪುನಃ ಪಡೆಯುವ ವಿಚಾರದಲ್ಲಿ ಸರ್ಕಾರ ಹೊರಡಿಸಿದ ನಿಬಂಧನೆಗಳು ಕ್ರಮೇಣ ಬಿಗಿಯಾದುವು. ಅವುಗಳನ್ನುಳಿಸಿಕೊಳ್ಳುವುದು ಇನಾಂದಾರರಿಗೆ ಕಷ್ಟವಾಯಿತು.

	1793ರ ಕಾನೂನಿನ ಪ್ರಕಾರವಾಗಿ, ಜಿಲ್ಲಾಧಿಕಾರಿ ಅಥವಾ ಕಲೆಕ್ಟರನೇ ವಾದಿಯಾಗಿ ನ್ಯಾಯಾಲಯದಲ್ಲಿ ದಾವೆ ಹೂಡಬೇಕಾಗಿತ್ತು. ಕ್ರಮಬದ್ಧವಾದ ಗ್ರಹಣಾಧಿಕಾರವಿಲ್ಲದ ಗೇಣಿರಹಿತ ಹಿಡುವಳಿದಾರನಿಗೆ ವಿರೋಧವಾಗಿ, 1871ರ ನಿಯಮಕ್ಕೆ ಅನುಸಾರವಾಗಿ, ಅಭ್ಯರ್ಪಿತ (ಸೀಡೆಡ್) ಪ್ರಾಂತ್ಯಗಳು ಮತ್ತು ಗೆದ್ದ ರಾಜ್ಯಗಳಲ್ಲಿ ಜಿಲ್ಲಾಧಿಕಾರಿಗಳು ರಾಜಸ್ವ ಮಂಡಳಿಯ (ರೆವಿನ್ಯೂ ಬೋರ್ಡ್) ಅನುಮತಿ ಪಡೆದು ಹಿಡುವಳಿಗಳ ಬೆಲೆ ಕಟ್ಟುವ ಅಧಿಕಾರ ಹೊಂದಿದ್ದರು; ಅವರ ನಿರ್ಣಯಕ್ಕೊಪ್ಪದಿದ್ದ ಹಿಡುವಳಿದಾರರು ನ್ಯಾಯಾಲಯದಲ್ಲಿ ದಾವೆ ಹೂಡಬೇಕಾಗಿತ್ತು. ಸರ್ಕಾರದ ನೀತಿ ಎಷ್ಟೇ ಯುಕ್ತವಾದುದಾದರೂ ಸ್ವಾಧೀನಾನುಭವದ ಹಕ್ಕನ್ನು ಕಸಿದುಕೊಂಡದ್ದು ವ್ಯಾಪಕವಾದ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು; ಹಿಂದಿನಿಂದಲೂ ಬಂದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯೂ ಹದಗೆಟ್ಟಿತು. ಸರ್ಕಾರವೂ ಈ ಪರಿಣಾಮವನ್ನು ಗಮನಿಸಿತು. 1822ರ ಗೊತ್ತುವಳಿಯೊಂದರಲ್ಲಿ ಸರ್ಕಾರ ದೇಶದಲ್ಲಿ ನಾನಾ ಕಡೆ ಅಶಾಂತಿ ಹರಡುತ್ತಿದೆಯೆಂದೂ ಆಡಳಿತವ್ಯವಸ್ಥೆ ಸಡಿಲಗೊಳ್ಳುತ್ತಿದೆಯೆಂದೂ ಹೇಳಿತು. ಈ ಅಶಾಂತಿಗೆ ಸರ್ಕಾರದ ನೀತಿ ಕಾರಣವಲ್ಲವೆಂದೂ ಆ ನೀತಿಯನ್ನು ತೀವ್ರವಾಗಿ ಕಾರ್ಯಗತಗೊಳಿಸಿದ್ದೇ ಕಾರಣವೆಂದೂ ಒಪ್ಪಿತು. ನಿಧಾನವಾಗಿ ಹಂತಹಂತವಾಗಿ ಈ ಬದಲಾವಣೆಗಳನ್ನು ಮಾಡಿದ್ದರೆ ಜನರಲ್ಲಿ ಇಷ್ಟೊಂದು ಅಸಮಾಧಾನವಿರುತ್ತಿರಲಿಲ್ಲ; ಅವರೂ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿದ್ದರು.

	ಜಮೀನ್ದಾರರ ಸ್ವತ್ತನ್ನು ಕಿತ್ತುಕೊಂಡದ್ದರಿಂದ ಅವರ ಆಶ್ರಿತರಿಗೆ ಕೆಲಸವಿಲ್ಲದಂತಾಗಿ ತೀವ್ರ ಅಸಮಾಧಾನಕ್ಕೆ ಎಡೆಯಾಯಿತು. ಅದರಲ್ಲನೇಕರು ಬಂಡಾಯಗಾರರ ಗುಂಪಿಗೆ ಸೇರಿದರು. ಗೇಣಿರಹಿತ ಭೂಮಿಗಳನ್ನು ಸ್ವಾಧೀನ ಪಡಿಸಿಕೊಂಡದ್ದರಿಂದ ಸರ್ಕಾರಕ್ಕೆ ಹೆಚ್ಚು ಕಂದಾಯ ದೊರಕಿತೇನೋ ನಿಜ. ಆದರೆ ಎಷ್ಟೋ ತಲೆಮಾರುಗಳಿಂದ ವೈಭವದಲ್ಲಿ ಮೆರೆದ ಜಮೀನ್ದಾರರು ಹಠಾತ್ತನೆ ದಟ್ಟದಾರಿದ್ರ್ಯವನ್ನು ಅನುಭವಿಸಬೇಕಾಯಿತು. ಇದು ಅನೇಕರ ವಿಷಯದಲ್ಲಿ ನೈತಿಕ ಪತನಕ್ಕೂ ಕಾರಣವಾಯಿತು. 1852ರಲ್ಲಿ ಗವರ್ನರ್ ಜನರಲ್ ಡಾಲ್‍ಹೌಸಿಯಿಂದ ನಿಯಮಿತವಾದ ಜನಾಂ ಆಯೋಗ ಜಮೀನ್ದಾರರು ತಮ್ಮ ಭೂಮಿಯ ಮೇಲೆ ಹೊಂದಿದ್ದ ಹಕ್ಕನ್ನು ಬೊಂಬಾಯಿನಲ್ಲಿ ನಿಂತು ತನಿಖೆ ಮಾಡಿತು. ಇದರ ಫಲವಾಗಿ ಸುಮಾರು 20,000 ಆಸ್ತಿಗಳನ್ನು ಸರ್ಕಾರ, ದಖನ್ ಪ್ರಾಂತ್ಯದಲ್ಲೇ ವಶಪಡಿಸಿಕೊಂಡಿತು. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಡುತ್ತಿತ್ತೆಂಬುದನ್ನು ಸರ್ಕಾರ ಗಮನಿಸಲಿಲ್ಲ. ಔಧ್‍ನಲ್ಲಂತೂ ಜನರ ಪರಿಸ್ಥಿತಿ ಶೋಚನೀಯವಾಯಿತು. ಅದನ್ನು ವಶಪಡಿಸಿಕೊಂಡ ಮೇಲೆ ಕೆಲವು ಕಾಲ ಕಮೀಷನರ್ ಆಗಿ ಸರ್ ಜೇಮ್ಸ್ ಔಟ್ರ್ಯಾಂ ಎಂಬ ಅಧಿಕಾರಿಯಿದ್ದ. ಉಪಕಾರಶೀಲನೂ ದಯಾಪರನೂ ಆಗಿದ್ದ ಇವನ ಅನಂತರ ಕವರ್ಲಿ ಜಾಕ್ಸನ್ ಎಂಬ ದುರಹಂಕಾರಿಯೂ ನಿರ್ದಯನೂ ಆಗಿದ್ದ ಕಮೀಷನರ್ ಬಂದ. ಹಿಂದಿನ ದೊರೆಗಳಿಂದ ವೇತನ ಪಡೆಯುತ್ತಿದ್ದವರ ವೇತನವನ್ನು ಈತ ರದ್ದುಮಾಡಿದ. ಹಿಂದಿನ ಸೈನಿಕರನ್ನು ಉದ್ಯೋಗದಿಂದ ನಿವೃತ್ತಿ ಮಾಡಿದ. ಹೀಗೆ ಹಿಂದೆ ಪ್ರಜೆಗಳ ರಾಜನಿಷ್ಠೆಗೆ ಹೆಸರಾಗಿದ್ದ ಔಧ್ ಸಂಸ್ಥಾನ ಅತೃಪ್ತಿ ಒಳಸಂಚುಗಳ ಉಗಮಸ್ಥಾನವಾಯಿತು. ಜಾಕ್ಸನ್ನನನ್ನು ಕೆಲಸದಿಂದ ನಿವೃತ್ತಿಗೊಳಿಸಿ ಹೆನ್ರಿ ಲಾರೆನ್ಸ್ ಎಂಬ ಸೌಮ್ಯ ಸ್ವಭಾವದ ಅಧಿಕಾರಿಯನ್ನು ನಿಯಮಿಸಿದ ಮೇಲೂ ಜನರ ಅತೃಪ್ತಿ ಹೋಗಲಿಲ್ಲ.

	ಹೀಗೆ ಹಿಂದಿನ ಕಾಲದಿಂದಲೂ ನಡೆದು ಬಂದಿದ್ದ ಇನಾಂ ಪದ್ಧತಿಯ ಅಕ್ರಮಗಳನ್ನು ನಿವಾರಿಸಲೆತ್ನಿಸಿದ್ದು ಭಾರತೀಯರು 1857ರಲ್ಲಿ ಬ್ರಿಟಿಷರಿಗೆ ವಿರೋಧವಾಗಿ ಸಿಡಿದೇಳುವುದಕ್ಕೆ ಒಂದು ಕಾರಣವಾಯಿತು.

	ಸ್ವಾತಂತ್ರ್ಯಾನಂತರದ ಸ್ಥಿತಿ: ಸ್ವಾತಂತ್ರ್ಯಕ್ಕೆ ಪೂರ್ವದಲ್ಲಿಯೇ ಭಾರತ ದೇಶದಲ್ಲಿ ವಿಸ್ತಾರವಾಗಿ ಹಬ್ಬಿದ ಈ ಜಹಗೀರ್ ಮತ್ತು ಇನಾಂ ಪದ್ಧತಿಯಿಂದ ಭೂಮಿಯ ಅಸಮಾನ ಹಂಚಿಕೆಯಾಗಿ ಆರ್ಥಿಕ ಅಸಮಾನತೆ ಹೆಚ್ಚಿದೆ ಎಂಬ ಅಸಂತೃಪ್ತಿ ಜನತೆಯಲ್ಲಿ ಹಬ್ಬಿತ್ತು. 1947ರಲ್ಲಿ ದೇಶ ಸ್ವತಂತ್ರವಾದ ಮೇಲೆ ದೇಶದ ಈ ಭೂ ಹಿಡುವಳಿಗಳ ಬಗ್ಗೆ ಸುಧಾರಣೆ ಮಾಡುವ ಕಾರ್ಯವನ್ನು ರಾಜ್ಯ ಸರ್ಕಾರಗಳು ಕೈಗೆತ್ತಿಕೊಂಡವು. ವಿವಿಧ ರಾಜ್ಯ ಸರ್ಕಾರಗಳು ಇನಾಂ ಮತ್ತು ಜಹಗೀರುಗಳನ್ನು ರದ್ದು ಮಾಡುವ ಅನೇಕ ಕಾಯಿದೆಗಳನ್ನು ಜಾರಿಯಲ್ಲಿ ತಂದಿವೆ. ಆ ಕಾಯಿದೆಗಳು ಜಾರಿಯಲ್ಲಿ ಬಂದ ಮೇಲೆ ಈ ಎಲ್ಲ ಬಗೆಯ ಇನಾಂಗಳೂ ಅಪಾರ ಬದಲಾವಣೆ ಹೊಂದಿವೆ. ಉಳುವವನೇ ನೆಲದೊಡೆಯನಾಗಬೇಕೆಂಬ ನೀತಿಗೆ ಅನುಗುಣವಾಗಿ ಈ ಕಾಯಿದೆಗಳನ್ನು ರಚಿಸಲಾಗಿದೆ. 

(ಕೆ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ